ವೆಸ್ಟರ್‍ಮಾರ್ಕ್, ಇ ಎ
	1862-1939. ಪ್ರಸಿದ್ಧ ಮಾನವಶಾಸ್ತ್ರಜ್ಞ. ಫಿನ್‍ಲೆಂಡಿನ ಹೆಲ್ಸೆಂಕಿ ಎಂಬಲ್ಲಿ 1862 ನವೆಂಬರ್ 20ರಂದು ಜನಿಸಿದ.  ಶಿಕ್ಷಣವನ್ನು ಅಲ್ಲಿಯೇ ಮುಗಿಸಿ 1890ರಲ್ಲಿ ಹೆಲ್ಸೆಂಕಿ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಅಧ್ಯಾಪಕನಾಗಿ ನೇಮಕಗೊಂಡ. ಇವನು ಮೂವತ್ತನೆಯ ವಯಸ್ಸಿಗೆ ಮೊದಲೇ ಹಿಸ್ಟರಿ ಆಫ್ ಹ್ಯೂಮನ್ ಮ್ಯಾರೇಜ್ (1891) ಎಂಬ ಪ್ರಮುಖ ಕೃತಿಯನ್ನು ಪ್ರಕಟಿಸಿದ. 1903-04ರಲ್ಲಿ ಸ್ಥಾಪಿತವಾದ ಇಂಗ್ಲಿಷ್ ಸೋಶಿಯಲಾಜಿಕಲ್ ಸೊಸೈಟಿ ಸಂಸ್ಥೆಯ ಬೆಂಬಲಿಗರಲ್ಲಿ ಇವನೂ ಒಬ್ಬ. ಮಾರಲ್ ಸೋಶಿಯಾಲಜಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಇವನು ನೈತಿಕತೆ ಎಂಬುದು ಸಮಾಜದ ಪ್ರಧಾನ ಅಂಶ. ಮಾತ್ರವಲ್ಲದೆ ಅದು ಸಮಾಜದ ಎಲ್ಲ ಸಾಮಾಜಿಕ ಸಂಸ್ಥೆಗಳ ಹೃದಯ ಭಾಗದಂತಿರುತ್ತದೆ ಎಂದು ನಂಬಿದ್ದ. 

	ಈತ ಲಂಡನ್ ವಿಶ್ವವಿದ್ಯಾಲಯದಲ್ಲಿ ತತ್ತ್ವಜ್ಞಾನದ ಪ್ರಾಧ್ಯಾಪಕನಾಗಿ ನೇಮಕಗೊಂಡ (1907-30). ಸಮಾಜಶಾಸ್ತ್ರೀಯ ಅಧ್ಯಯನಗಳಲ್ಲಿ ಮಾನವ ವಿವಾಹ ಇತಿಹಾಸ, ನೈತಿಕ ವಿಚಾರಗಳ ತುಲನಾತ್ಮಕ ಸಮಾಜ ಶಾಸ್ತ್ರೀಯ ಅಧ್ಯಯನ, ಸಾಮಾಜಿಕ ಸಂಸ್ಥೆಗಳ ಉಗಮ ಹಾಗೂ ಬೆಳೆವಣಿಗೆಯ ಹಿನ್ನೆಲೆಯ ಅಧ್ಯಯನ, ಮಾನವ ಕುಟುಂಬದ ಐತಿಹಾಸಿಕ ಹಾಗೂ ಸಮಾಜಶಾಸ್ತ್ರೀಯ ಅಧ್ಯಯನ, ಮೊರಕ್ಕೊ ಸಂಸ್ಕøತಿಯ ಅಧ್ಯಯನ ಇತ್ಯಾದಿಗಳು ಈತನ ಆಸಕ್ತಿಯ ಕ್ಷೇತ್ರಗಳಾಗಿದ್ದವು. ಈತನ ಮತ್ತೊಂದು ಕೃತಿ ದಿ ಆರಿಜನ್ ಅಂಡ್ ಡೆವಲಪ್‍ಮೆಂಟ್ ಆಫ್ ಮಾರಲ್ ಐಡಿಯಾಸ್ (1906-08). ಎರಡು ಸಂಪುಟಗಳಲ್ಲಿರುವ ಈ ಕೃತಿಯಲ್ಲಿ ನೈತಿಕ ಸಾಪೇಕ್ಷತೆಗೆ ಸಂಬಂಧಿಸಿದ ತತ್ತ್ವವೊಂದನ್ನು ಪ್ರತಿಪಾದಿಸಿದ್ದು ಅದರಂತೆ ನೈತಿಕ ನಿರ್ಣಯಗಳು ಅಂತಿಮವಾಗಿ ಸಾಮಾಜಿಕ ಅಂಗೀಕಾರ ಅಥವಾ ತಿರಸ್ಕಾರ ಭಾವನೆಯನ್ನು ಆಧರಿಸಿ ನಿಂತಿರುತ್ತವೆಯೇ ಹೊರತು ನಮ್ಮ ಬೌದ್ಧಿಕತೆಯನ್ನಲ್ಲ, ಎಂದು ಪ್ರತಿಪಾ ದಿಸಿದ್ದಾನೆ. 

	ಸಮಾಜಶಾಸ್ತ್ರಜ್ಞ, ತತ್ತ್ವಜ್ಞಾನಿ ಹಾಗೂ ಮಾನವಶಾಸ್ತ್ರಜ್ಞನಾಗಿದ್ದ ಈತ ನೈತಿಕತೆಯ ಸಮಾಜಶಾಸ್ತ್ರ, ಕುಟುಂಬ ಹಾಗೂ ವಿವಾಹಗಳ ಐತಿಹಾಸಿಕ ಬೆಳೆವಣಿಗೆ-ಈ ವಿಷಯಗಳ ಅಧ್ಯಯನಗಳಿಂದಾಗಿ ಸಮಾಜ ಶಾಸ್ತ್ರ ಮತ್ತು ಮಾನವಶಾಸ್ತ್ರ ಕ್ಷೇತ್ರಗಳೆರಡರಲ್ಲೂ ಪಾಂಡಿತ್ಯ ಗಳಿಸಿದ್ದ. ಆದಿಮಾನವರು ನೈತಿಕ ಕಟ್ಟುಪಾಡುಗಳಿಲ್ಲದಂತಹ ಒಂದು ಬಗೆಯ ಶಿಥಿಲ ಲೈಂಗಿಕತೆಯಲ್ಲಿ ತೊಡಗಿದ್ದರೆಂಬ ಪ್ರಚಲಿತ ಸಿದ್ಧಾಂತವನ್ನು ನಿರಾಕರಿಸಿದ. ಈತ ಮಾನವರ ಮೊಟ್ಟಮೊದಲ ಲೈಂಗಿಕ ಅನುರಾಗ, ಏಕಪತ್ನೀ ವಿವಾಹದ ಸ್ವರೂಪದಲ್ಲಿಯೇ ಇತ್ತು ಎಂಬುದಾಗಿಯೂ ಆದಿವಾಸಿ ವಿವಾಹದ ಬೇರುಗಳು ಮೂಲ ಕುಟುಂಬದ ಅಗತ್ಯತೆಯಲ್ಲಿ ನೆಟ್ಟಿವೆ ಮತ್ತು ಅಂತಹ ಕುಟುಂಬ ಪ್ರಪಂಚದ ಎಲ್ಲೆಡೆಗಳಲ್ಲೂ ಸಮಾಜದ ಮೂಲಭೂತ ಹಾಗೂ ಸಾರ್ವತ್ರಿಕ ಘಟಕವಾಗಿದೆ ಎಂಬುದಾ ಗಿಯೂ ಅಂಶಗಳನ್ನು ಪ್ರತಿಪಾದಿಸಿದ್ದಾನೆ. 

	ನೀತಿಶಾಸ್ತ್ರವನ್ನು ಒಂದು ಸಮಾಜಶಾಸ್ತ್ರೀಯ ಹಾಗೂ ಮನಶ್ಶಾಸ್ತ್ರೀಯ ವಿಜ್ಞಾನವೆಂದೇ ಪರಿಗಣಿಸಿರುವ ಇವನು ಎಲ್ಲರಿಗೂ ಅನ್ವಯವಾಗುವ ಸಾಮಾನ್ಯ ನೈತಿಕ ಸತ್ಯಗಳಿರುತ್ತವೆ ಎಂಬ ನಂಬಿಕೆಯನ್ನು ಹಾಗೂ ನೈತಿಕ ನಿರ್ಣಯಗಳ ವಸ್ತುನಿಷ್ಠ ಸಮಂಜಸತೆಯ ವಿಚಾರವನ್ನು ಅಲ್ಲಗಳೆ ದಿದ್ದಾನೆ. ವರ್ತನೆಗೆ ಸಂಬಂಧಿಸಿದ ನಿಯಮಕ್ಕಿಂತಲೂ ಮಿಗಿಲಾಗಿ ನೈತಿಕ ಪ್ರಜ್ಞೆಯನ್ನು ಪರೀಕ್ಷೆ ಮಾಡುವಂಥ ನೈತಿಕತೆಗೆ ಈತ ಒತ್ತಾಸೆ ನೀಡಿದ್ದಾನೆ.						
		(ಪಿ.ಎನ್.ಎಚ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ